Wednesday 16 April 2014

ಸೌಜನ್ಯಪರ ಹೋರಾಟಗಾರ ಶ್ರೀ ಮಹೇಹ್ ಶೆಟ್ಟಿ ತಿಮರೋಡಿಯ ಬೆಂಬಲ ನರೇಂದ್ರ ಮೋದಿಗೆ


ಸೌಜನ್ಯ ಸಾವಿಗೆ ನ್ಯಾಯ ಒದಗಿಸಲು ಪ್ರಜಾಪ್ರಭುತ್ವ ವೇದಿಕೆಯ ಮೂಲಕ ಹೋರಾಟವನ್ನು ನಡೆಸಿ ಸೌಜನ್ಯ ಪ್ರಕರಣ ಸಿಬಿಐ ವಶಕ್ಕೆ ಹೋಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಹೇಶ್ ತಿಮರೋಡಿ ಅವರು ಬಿಜೆಪಿಗೆ ತನ್ನ ಬೆಂಬಲವನ್ನು ಅಧಿಕೃತವಾಗಿ ಘೋಷಿಸಿದ್ದಾರೆ.
ಈ ಮೂಲಕ ಕಳೆದ ಹಲವಾರು ಸಮಯದಿಂದ ತಿಮರೋಡಿಯ ರಾಜ ಕೀಯ ನಿಲುವಿನ ಬಗ್ಗೆ ಕವಿದಿದ್ದ ಕುತೂ ಹಲದ ತೆರೆ ಸರಿದು ಹೋಗಿದೆ. ಮತ ಕೇಳಲೆಂದು ಮನೆಗೆ ಬಂದಿದ್ದ ನಳಿನ್ ಕುಮಾರ್ ಕಟೀಲ್ ಅವರಿಗೆ ಹೂವಿನ ಹಾರ ಹಾಕಿ ಸ್ವಾಗತಿಸುವ ಮೂಲಕ ತನ್ನ ಬೆಂಬಲ ಬಿಜೆಪಿಗೆ ಎನ್ನುವ ನಿಲುವನ್ನು ಪರೋಕ್ಷವಾಗಿ ರವಾನಿಸಿದ್ದರೂ, ನಿನ್ನೆ ಪತ್ರಿಕಾಗೋಷ್ಠಿಯನ್ನು ನಡೆಸಿ ತಾನು ಮೋದಿಯನ್ನು ಬೆಂಬಲಿಸುತ್ತಿದ್ದು ದೇಶದಲ್ಲಿ ಪರಿಣಾಮಕಾರಿಯಾದ ಬದಲಾವಣೆ ಆಗಬೇಕಿದೆ ಎಂದರು.
ಈ ಹಿಂದೆ ವಿಧಾನ ಸಭಾ ಚುನಾವಣಾ ಸಮಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಮಹೇಶ್ ಶೆಟ್ಟಿ ಆ ಸಮಯದಲ್ಲೇ ಎಂಟು ಸಾವಿರ ಮತಗಳನ್ನು ಪಡೆದಿದ್ದರು. ಇದೀಗ ಸೌಜನ್ಯ ಪ್ರಕರಣದಲ್ಲಿ ಅವರ ಹೋರಾಟ ತುಳುನಾಡಿನ ಜನ ಸಾಮಾನ್ಯರಲ್ಲೂ ಗಾಢವಾದ ಪರಿಣಾಮ ಬೀರಿದ್ದ ಕಾರಣ ಅವರ ಹಿಂದೆ ಜನ ಬೆಂಬಲ ಅತೀ ಹೆಚ್ಚಿತ್ತು. ಇದರ ಲಾಭವನ್ನು ಪಡೆದುಕೊಂಡು ತಿಮರೋಡಿ ಚುನಾವಣೆಗೆ ನಿಲ್ಲುತ್ತಾರೆ ಎನ್ನುವ ಪ್ರಚಾರ ಇತ್ತಾದರೂ ಈ ಬಗ್ಗೆ ಧೋರಣೆ ಹೊಂದಿರದ ಕಾರಣ ಅವರ ಬೆಂಬಲ ಯಾರಿಗೆ ಎನ್ನುವ ಕುತೂಹಲ ಸಹಜವಾಗಿಯೇ ಇದ್ದವು. ತಿಮರೋಡಿ ಅವರು ಭಾನುವಾರದವರೆಗೆ ತನ್ನ ನಿಲುವನ್ನು ಸ್ಪಷ್ಟಪಡಿಸದೇ ಇದ್ದ ಕಾರಣ ಈ ಕುತೂಹಲ ಮತ್ತಷ್ಟು ಹೆಚ್ಚಾಗಿತ್ತು. ಈ ನಡುವೆ ಮಹೇಶ್ ಶೆಟ್ಟಿ ಅವರನ್ನು ಸಿಪಿಐಎಂ ಮತ್ತು ಡಿವೈಎಫ್‍ಐ ನಾಯಕರೂ ಭೇಟಿ ಮಾಡಿದ್ದು, ಈ ಹಿಂದೆ ಸೌಜನ್ಯ ಹೋರಾಟ ನಡೆದಾಗಲೂ ಈ ಸಂಘಟನೆ ತಿಮರೋಡಿಗೆ ಬೆಂಬಲ ನೀಡಿದ್ದ ಕಾರಣ ತಿಮರೋಡಿ ಸಿಪಿಐಎಂ ಪಕ್ಷವನ್ನು ಬೆಂಬಲಿಸುತ್ತಾರೆ ಎಂದೇ ನಂಬಲಾಗಿತ್ತು. ಇದಾದ ಬಳಿಕ ಆಶ್ಚರ್ಯಕರ ಬೆಳವಣಿಗೆಯಲ್ಲಿ ನಳಿನ್ ಕುಮಾರ್ ಕಟೀಲ್ ಮತ್ತು ಕಲ್ಲಡ್ಕ ಪ್ರಭಾಕರ್ ಭಟ್ ಅವರು ತಿಮರೋಡಿ ಅವರ ಮನೆಗೆ ಭೇಟಿ ನೀಡಿದ್ದರು. ತಿಮರೋಡಿ ಅವರು ಹಾರ ಹಾಕಿ ನಳಿನ್ ಅವರನ್ನು ಸ್ವಾಗತಿಸಿದ್ದರು. ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. 
ಬಿಜೆಪಿ ಜಿಲ್ಲಾಧ್ಯಕ್ಷರು ಇದೊಂದು ಸಾಮಾನ್ಯ ಭೇಟಿಯೇ ವಿನಃ ತಿಮರೋಡಿ ನಮ್ಮ ಕಾರ್ಯಕರ್ತರಲ್ಲ ಎಂದಿದ್ದರು. ಇತ್ತ ಪತ್ರಿಕಾಗೋಷ್ಠಿ ನಡೆಸಿದ ತಿಮರೋಡಿ ಅವರು ನಾನು ಮೋದಿಯನ್ನು ಬೆಂಬಲಿಸುತ್ತೇನೆ ನಮ್ಮ ವೇದಿಕೆಯ ಕಾರ್ಯಕರ್ತರು ಇದೇ ನಿಲುವನ್ನು ಹೊಂದಿದ್ದಾರೆ. ಇದು ನಳಿನ್ ಭೇಟಿಗಿಂತ ಮುಂಚೆಯೂ ಇದ್ದ ಸಿದ್ಧಾಂತವೇ ಆಗಿದೆ. ಇದಕ್ಕೂ ಸೌಜನ್ಯ ಹೋರಾಟಕ್ಕೂ ಸಂಬಂಧವೇ ಇಲ್ಲ. ಅಲ್ಲದೇ ಸೌಜನ್ಯ ಹೆತ್ತವರು ಯಾವುದೇ ಪಕ್ಷವನ್ನು ಬೆಂಬಲಿಸದೇ ತಟಸ್ಥರಾಗಿದ್ದಾರೆ ಎಂದರು. ಹೀಗಾಗಿ ಈ ಘಟನೆಗೆ ವಿಶೇಷ ಅರ್ಥ ಬೇಡ ಸೌಜನ್ಯ ಹೋರಾಟದಲ್ಲಿ ಬಿಜೆಪಿ ಅಸಹಕಾರ ತೋರಿದಾಗ ಖಂಡಿಸಿದ್ದೇನೆ. ಮುಂದೆಯೂ ಖಂಡಿಸುತ್ತೇನೆ. ಆದರೆ ದೇಶದ ನಾಯಕತ್ವ ಮೋದಿಗೆ ಸಿಗಬೇಕು ಎನ್ನುವ ಕಾರಣಕ್ಕೆ ಬಿಜೆಪಿಯನ್ನು ಬೆಂಬಲಿಸುವುದಾಗಿ ತಿಳಿಸಿದರು. ವಸಂತ ಬಂಗೇರ ಅವರು ಸೌಜನ್ಯ ಹೋರಾಟದಲ್ಲಿ ಬೆಂಬಲವನ್ನು ನೀಡಿದ್ದಾರೆ. ಏಕೆಂದರೆ ಅದರಲ್ಲಿ ಅವರ ಸ್ವಾರ್ಥವೂ ಇತ್ತು, ಆದರೆ ಇತ್ತೀಚೆಗೆ ಅವರೂ ನುಣುಚಿಕೊಳ್ಳುತ್ತಿದ್ದಾರೆ. ನನ್ನ ರಾಜಕೀಯ ನಿಲುವೇ ಬೇರೆ ಹೋರಾಟದ ನಿಲುವೇ ಬೇರೆ ಯಾರೂ ಇಲ್ಲವಾದರೂ ನಾನು ಹೋರಾಡುತ್ತೇನೆ ಎಂದರು.
ಸಿಬಿಐಗೆ ಒಪ್ಪಿಸಿದ್ದು ರಾಜ್ಯ ಸರಕಾರ ಅಲ್ಲ: ತಿಮರೋಡಿ 
ಪ್ರಜಾಪ್ರಭುತ್ವ ವೇದಿಕೆ ಸೌಜನ್ಯ ಸಾವಿಗೆ ನ್ಯಾಯ ಒದಗಿಸಲು ಹೋರಾಟವನ್ನು ಆರಂಭಿಸಿದ ಬಳಿಕ ರಾಜ್ಯಾದ್ಯಂತ ಹೋರಾಟಗಳೇ ನಡೆದಿದ್ದವು, ದೇಶದ ಹಲವಾರು ಕಡೆ ವಿದ್ಯಾರ್ಥಿಗಳೂ ಬೀದಿಗಿಳಿದು ಹೋರಾಟ ನಡೆಸಿದ್ದರಲ್ಲದೆ ಸೌಜನ್ಯ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವಂತೆ ಒತ್ತಾಯಿಸಿದ್ದರು. ಪರಿಣಾಮ ಪ್ರಕರಣ ಸಿಬಿಐಗೆ ಹಸ್ತಾಂತರವಾಗಿತ್ತು. ಇದೀಗ ಈ ಬಗ್ಗೆ ಪ್ರತಿಕ್ರಿಯೇ ನೀಡಿದ ತಿಮರೋಡಿ ಅವರು ರಾಜ್ಯ ಸರಕಾರ ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿಲ್ಲ, ಬದಲಾಗಿ ಬೇರೆ ಪ್ರಕರಣದ ವಿಚಾರಣೆಗೆ ಜಿಲ್ಲೆಗೆ ಬಂದಿದ್ದ ಸಿಬಿಐ ತಂಡದ ಅಧಿಕಾರಿ ಇಲ್ಲಿ ಸೌಜನ್ಯಳ ಸಾವಿನ ಬಗ್ಗೆ ಅಕ್ರೋಶ ವ್ಯಕ್ತ ಪಡಿಸಿ ನ್ಯಾಯ ಕೋರಿ ಹಾಕಿದ್ದ ಬ್ಯಾನರ್‍ಗಳನ್ನು ಗಮನಿಸಿ ಪ್ರಕರಣದ ಬಗ್ಗೆ ತಿಳಿದುಕೊಂಡು ಸ್ವಯಂಪ್ರೇರಿತರಾಗಿ ಈ ಪ್ರಕರಣವನ್ನು ವಿಚಾರಣೆಗೆ ಪಡೆದುಕೊಂಡಿದ್ದಾರೆಯೇ ವಿನಃ ಇದು ಸರಕಾರದಿಂದ ಆಗಿರುವ ಕೆಲಸ ಅಲ್ಲ ಎಂದಿದ್ದಾರೆ.
ಕೃಪೆ : ಜಯಕಿರಣ 

No comments:

Post a Comment