Monday, 28 October 2013

ಸಿಬಿಐಗೆ ಕೊಡಲು ರಾಜ್ಯದ ಹಿಂದೇಟು ಯಾಕೆ


ಸೌಜನ್ಯಾ ಮನೆಯವರಿಗೆ ನ್ಯಾಯ ಸಿಗಬೇಕು

ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು

ರಾಜ್ಯದ ಹಿಂದೇಟಿನ ಕಾರಣ ಎಲ್ಲರಿಗೂ ತಿಳಿದಿದೆ

ತಳಮಟ್ಟ ಸೇರಿದ ಕರ್ನಾಟಕದ ರಾಜಕಾರಣ

ದೇಶದ ಭವಿಷ್ಯ ನಿರ್ಧರಿಸುವವರು ಜನರು

ಬೆಳ್ತಂಗಡಿ: 
ಸೌಜನ್ಯಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲು ರಾಜ್ಯ ಸರಕಾರದ ಹಿಂದೇಟು ಯಾಕೆ ಎಂದು ಸಿಪಿಎಂ ಅಖೀಲ ಭಾರತ ಪ್ರಧಾನ ಕಾರ್ಯದರ್ಶಿ ಪ್ರಕಾಶ್‌ ಕಾರಟ್‌ ಪ್ರಶ್ನಿಸಿದ್ದಾರೆ.

ಅವರು ರವಿವಾರ ರಾತ್ರಿ ಧರ್ಮಸ್ಥಳದ ಪಾಂಗಾಳದ ಸೌಜನ್ಯಾ ಮನೆಗೆ ಭೇಟಿ ನೀಡಿ ಮಾಧ್ಯಮದವರ ಜತೆ ಮಾತನಾಡಿದರು.

ಈ ಪ್ರಕರಣದ ಸರಿಯಾದ ತನಿಖೆ ನಡೆಯಲಿಲ್ಲ ಎಂದು ಎಲ್ಲರೂ ಹೇಳುತ್ತಿದ್ದಾರೆ. ನಿಜವಾದ ಅಪರಾಧಿಗಳನ್ನು ಕಂಡು ಹಿಡಿಯಲಿಲ್ಲ ಎಂದು ಅನುಮಾನಿಸಲಾಗುತ್ತಿದೆ. ನಮ್ಮ ಪಕ್ಷ ಹಾಗೂ ಇತರರು ಸಿಬಿಐ ತನಿಖೆಗೆ ಆಗ್ರಹಿಸುತ್ತಿದ್ದಾರೆ. ಹಾಗಿದ್ದರೂ ರಾಜ್ಯ ಸರಕಾರ ಯಾಕೆ ಹಿಂದೇಟು ಹಾಕುತ್ತಿದೆ ಎಂದು ಅವರು ಪ್ರಶ್ನಿಸಿದರು.

ಸೌಜನ್ಯಾ ಕುಟುಂಬದ ಜತೆ ನಾವಿದ್ದೇವೆ
ರಾಜ್ಯ ಸರಕಾರ ಈ ಕುರಿತು ತತ್‌ಕ್ಷಣ ತೀರ್ಮಾನ ಕೈಗೊಳ್ಳಬೇಕು. ಇದಕ್ಕೇ ಬೇಕಾದ ಎಲ್ಲ ಅಗತ್ಯ ಕ್ರಮಗಳನ್ನೂ ಸಿಪಿಎಂ ಕೈಗೊಳ್ಳಲಿದೆ. ಸೌಜನ್ಯಾ ಮನೆಯವರಿಗೆ ನ್ಯಾಯ ಸಿಗಬೇಕು. ಇದು ಭಯಾನಕ, ಕ್ರೂರ ಹಾಗೂ ಹೇಯ ಕೃತ್ಯ. ನಿಜವಾದ ಅಪರಾಧಿಗಳು ಪತ್ತೆಯಾಗಲೇಬೇಕು. ಇಂತಹ ದೌರ್ಜನ್ಯವನ್ನು ನಾವು ಖಂಡಿಸುತ್ತೇವೆ. ಸೌಜನ್ಯಾ ಮನೆಯವರ ಜತೆಗೆ ನಾವು ಇರುತ್ತೇವೆ ಎಂದರು.

ಪ್ರಯತ್ನ ಮಾಡಲಿದ್ದೇವೆ
ಸರಕಾರ ಸಿಬಿಐಗೆ ವಹಿಸಿಕೊಡಲಿದೆ ಎಂಬ ವಿಶ್ವಾಸವಿಟ್ಟು ನಾವು ಪ್ರಯತ್ನ ಮಾಡಲಿದ್ದೇವೆ. ನಾಗಪುರ ಸೇರಿದಂತೆ ದೇಶದ ವಿವಿಧೆಡೆ ಇಂತಹ ಕೃತ್ಯಗಳು ನಡೆದಿವೆ. ಸ್ಥಳೀಯ ಸರಕಾರಗಳು ಜನರ ಬೇಡಿಕೆಗೆ ಮಣಿದು ಸಿಬಿಐಗೆ ವಹಿಸಿವೆ. ನಾವು ಸದನದಲ್ಲಿ ಈ ವಿಷಯ ಪ್ರಸ್ತಾಪ ಮಾಡಿದರೂ ರಾಜ್ಯ ಸರಕಾರ ಅಥವಾ ಹೈಕೋರ್ಟ್‌ ಮಾತ್ರ ಸಿಬಿಐಗೆ ಕೊಡಲು ಸಮರ್ಥರು. ಕೇಂದ್ರ ಸರಕಾರ ಸಲಹೆ ನೀಡಬಹುದು ಅಷ್ಟೇ. ಆದ್ದರಿಂದ ಸರಕಾರ ಗಂಭೀರವಾಗಿ ಇದನ್ನು ಪರಿಗಣಿಸಬೇಕು ಎಂದರು.

ಇತರ ಪಕ್ಷಗಳು ಒತ್ತಡ ಹೇರುತ್ತಿಲ್ಲ
ಸಿಪಿಎಂ ರಾಜ್ಯ ಕಾರ್ಯದರ್ಶಿ, ಮಾಜಿ ಶಾಸಕ ಜಿ.ವಿ. ಶೀÅರಾಮ ರೆಡ್ಡಿ ಮಾತನಾಡಿ, ರಾಜ್ಯ ಸರಕಾರ ಯಾಕೆ ಹಿಂದೇಟು ಹಾಕುತ್ತಿದೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ. ಅದಕ್ಕೆ ಪ್ರತ್ಯೇಕ ರಾಜಕೀಯ ಕಾರಣಗಳಿವೆ. ಸಿಪಿಎಂ ಹೊರತುಪಡಿಸಿ ಇತರ ಯಾವುದೇ ಪಕ್ಷಗಳು ತಮ್ಮ ರಾಜಕೀಯ ಹಿತಾಸಕ್ತಿಗೆ ಈ ವಿಚಾರದ ಸಿಬಿಐ ತನಿಖೆಗೆ ಒತ್ತಡ ತರುತ್ತಿಲ್ಲ. ಕರ್ನಾಟಕದ ರಾಜಕಾರಣ ಎಷ್ಟು ತಳಮುಟ್ಟಿದೆ ಎನ್ನುವುದು ಇದರಿಂದ ತಿಳಿಯುತ್ತದೆ ಎಂದರು.

ಸಿಪಿಎಂ ಹೋರಾಟದಿಂದ ಇಂದು ಜನರ ಬಾಯಲ್ಲಿ ಸೌಜನ್ಯಾ ಪ್ರಕರಣ ಸಿಬಿಐಗೆ ಒಪ್ಪಿಸಬೇಕೆಂಬ ಮಾತು ಎಲ್ಲೆಡೆ ಕೇಳಿ ಬರುತ್ತಿದೆ. ಜನರ ಅಭಿಪ್ರಾಯಕ್ಕೆ ಮನ್ನಣೆ ಕೊಡದ ಸರಕಾರ ಬಾಳಿಕೆ ಬರುವುದಿಲ್ಲ. ಏಕೆಂದರೆ ಜನರಿಗೆ ರಾಜಕೀಯ ದುರುದ್ದೇಶ ಇರುವುದಿಲ್ಲ. ದೇಶದ ಭವಿಷ್ಯ ತೀರ್ಮಾನ ಮಾಡುವುದು ಜನರೇ ವಿನಃ ಜನಪ್ರತಿನಿಧಿಗಳಲ್ಲ. ಆದ್ದರಿಂದ ತತ್‌ಕ್ಷಣ ರಾಜ್ಯ ಸರಕಾರ ಮುತುವರ್ಜಿ ವಹಿಸಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದರು.

ಸೌಜನ್ಯಾರ ತಂದೆ ಚಂದಪ್ಪ ಗೌಡ ಹಾಗೂ ತಾಯಿ ಕುಸುಮಾವತಿ ಅವರು ಸಿಬಿಐ ಹೊರತುಪಡಿಸಿ ಇತರ ತನಿಖೆಗಳಲ್ಲಿ ನಂಬಿಕೆ ಇಲ್ಲ ಎಂದರು.

ಸಿಪಿಐಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಬಿ.ಎಂ. ಭಟ್‌, ವಸಂತ ಆಚಾರಿ, ತಾಲೂಕು ಕಾರ್ಯದರ್ಶಿ ಶಿವಕುಮಾರ್‌, ಡಿವೈಎಫ್‌ಐ ಜಿಲ್ಲಾಧ್ಯಕ್ಷ ಮುನೀರ್‌ ಕಾಟಿಪಳ್ಳ, ಕರ್ನಾಟಕ ಪ್ರಾಂತ ರೈತ ಸಂಘದ ಹರಿದಾಸ್‌, ಜನವಾದಿ ಮಹಿಳಾ ಸಂಘಟನೆಯ ಸುಕನ್ಯಾ, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ದಯಾನಂದ ಶೆಟ್ಟಿ, ಶೇಖರ್‌ ಎಲ್‌., ಇಮಿ¤ಯಾಜ್‌ ಮೊದಲಾದವರು ಇದ್ದರು.

(Courtesy: Udayavani)

No comments:

Post a Comment