Saturday 19 October 2013

ಯಾವುದೇ ಬೆದರಿಕೆಗೂ ಹೋರಾಟ ನಿಲ್ಲದು: ಕೇಮಾರು ಶ್ರೀ



ಸೌಜನ್ಯಳಿಗೆ ನ್ಯಾಯ ಕೊಡಿಸಲು ಜಾತಿ, ಧರ್ಮ, ಪಕ್ಷ, ಭೇದ ಮರೆತು ಎಲ್ಲರೂ ಒಂದಾಗಿ ಹೋರಾಡಬೇಕಾಗಿದೆ. ಸೌಜನ್ಯ ಪರ ಮಾತನಾಡಿದರೆ ಖಾವಿ ಬಿಚ್ಚಿಸುವ ಮಾತನ್ನಾಡಿದ್ದಾರೆ. ಆದರೆ ಈ ಯಾವುದೇ ಬೆದರಿಕೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಕೇಮಾರು ಸಾಂದೀಪನಿ ಆಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು. 


ಬೆಳ್ತಂಗಡಿಯಲ್ಲಿ ಡಿವೈಎಫ್‌ಐ, ಜೆಎಂಎಸ್, ಎಸ್‌ಎಫ್‌ಐ ನೇತೃತ್ವದಲ್ಲಿ ಸೌಜನ್ಯಳ ಹುಟ್ಟಿದ ದಿನವಾದ ಶುಕ್ರವಾರ ಆಕೆಯ ಕೊಲೆ, ಅತ್ಯಾಚಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಒತ್ತಾಯಿಸಿ ದಿನವಿಡೀ ನಡೆದ ಉಪವಾಸ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು. 

ರಾಜಕಾರಣಿಗಳು ಮಾಧ್ಯಮದಲ್ಲಿ ಹೇಳಿಕೆ ಕೊಡುವುದನ್ನು ಬಿಟ್ಟು ಸಂಸತ್ತು, ವಿಧಾನ ಸೌಧದಲ್ಲಿ ಧ್ವನಿ ಎತ್ತಲಿ. ಜನಪ್ರತಿನಿಧಿಗಳೆಲ್ಲರೂ ಒಟ್ಟಾಗಿ ಸೌಜನ್ಯಗಳಿಗಾದ ಅನ್ಯಾಯಕ್ಕೆ ನ್ಯಾಯ ಒದಗಿಸಲು ಹೋರಾಡೋಣ ಎಂದು ಹೇಳಿದ ಕೇಮಾರು ಸ್ವಾಮೀಜಿ, 

ಮಹಿಳೆಯರೆಲ್ಲರೂ ಇದು ತಮ್ಮ ಮಗಳಿಗಾದ ಅನ್ಯಾಯ ಎಂದು ಭಾವಿಸಿ ಧ್ವನಿ ಎತ್ತಬೇಕು, ಇದು ಯಾರದೇ ವಿರುದ್ಧ ಹೋರಾಟವಲ್ಲ, ಸೌಜನ್ಯಳ ಸಾವಿಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕು ಎಂಬ ಗುರಿಯೊಂದಿಗೆ ಹೋರಾಟ ಎಂದು ಹೇಳಿದರು. 

ಬೆಳಗ್ಗೆ 11 ಗಂಟೆಯಿಂದ ಸಂಜೆ 4.30ರವರೆಗೆ ನಡೆದ ಉಪವಾಸ ಸತ್ಯಾಗ್ರಹವನ್ನು ಸಿಪಿಎಂ ರಾಜ್ಯ ಕಾರ್ಯದರ್ಶಿ ಜಿ.ವಿ. ಶ್ರೀರಾಮ ರೆಡ್ಡಿ ಉದ್ಘಾಟಿಸಿದರು. 

ಇದು ಯಾವುದೇ ಧರ್ಮ ಇಲ್ಲವೇ ವ್ಯಕ್ತಿ ವಿರುದ್ಧ ಹೋರಾಟವಲ್ಲ, ವ್ಯವಸ್ಥೆಯ ವಿರುದ್ಧ ಹೋರಾಟ. ಧರ್ಮಸ್ಥಳದಲ್ಲಿ ಹಿಂದೆ ಪದ್ಮಲತಾಳ ಅತ್ಯಾಚಾರ ಮತ್ತು ಕೊಲೆಯಾಗಿತ್ತು. ಈಗ ಸೌಜನ್ಯ. ಇದು ಇಲ್ಲಿಗೇ ನಿಲ್ಲಬೇಕು.. ಅದಕ್ಕಾಗಿ ಈ ಹೋರಾಟ. ಪ್ರಕರಣದ ಸಿಬಿಐ ತನಿಖೆ ನಡೆದು ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಹೇಳಿದ ಜಿ.ವಿ. ಶ್ರೀರಾಮ ರೆಡ್ಡಿ, ಪ್ರಕರಣದ ತನಿಖೆಯಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ. ಪೊಲೀಸರು ಹಂತಕರನ್ನು ಬಂಧಿಸುವ ಬದಲು, ದೌರ್ಜನ್ಯದ ವಿರುದ್ಧ ದನಿ ಎತ್ತುವವರನ್ನೇ ದಮನಿಸಲು ಹೊರಟಿದ್ದಾರೆ. ನೊಂದವರ ಪರವಾಗಿ ನಿಲ್ಲಬೇಕಾಗಿದ್ದ ಸರಕಾರ ಶೋಷಕರ ಪರ ನಿಂತಿದೆ ಎಂದರು. 

ಡಿವೆಎಫ್‌ಐ ಜಿಲ್ಲಾ ಅಧ್ಯಕ್ಷ ಮುನೀರ್ ಕಾಟಿಪಳ್ಳ ಮಾತನಾಡಿ, ಜನನಾಯಕರು ಜನರ ಮನಸ್ಸಿನಲ್ಲೇನಿದೆ ಎಂಬುದನ್ನು ಅರಿತು ವರ್ತಿಸಲಿ. ಸಮಾಜವಾದಿ ನಾಯಕ ಸಿದ್ದರಾಮಯ್ಯನವರು ಈಗಲಾದರೂ ಎಚ್ಚೆತ್ತುಕೊಳ್ಳಲಿ. ಬೆಳ್ತಂಗಡಿ ಶಾಸಕ ವಸಂತ ಬಂಗೇರರು ಯಾರ ಪರವೂ ಗುರುತಿಸಿಕೊಳ್ಳದೆ ನಿಂತಿದ್ದಾರೆ. ಅವರು ನ್ಯಾಯದ ಪರ ಇದ್ದಾರೆ ಎಂದು ನಾನು ಭಾವಿಸುತ್ತೇವೆ ಎಂದರು. 

ಜನಪರ ಹೋರಾಟಗಾರ್ತಿ ಅಮೃತಾ ಶೆಟ್ಟಿ ಅತ್ರಾಡಿ ಇಂಥ ಕ್ರೌರ್ಯ ಮೆರೆದವರನ್ನು ಶಿಕ್ಷಿಸಲು ಸಂಘಟಿತ ಹೋರಾಟ ಅಗತ್ಯವಿದೆ ಎಂದರು. 

ಧರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ)ದ ಜಿಲ್ಲಾ ಸಂಚಾಲಕ ಚಂದು ಎಲ್., ದಲಿತ ಸಂಘರ್ಷ ಸಮಿತಿ (ಕೃಷ್ಣಪ್ಪ ಸ್ಥಾಪಿತ) ಜಿಲ್ಲಾ ಸಂಚಾಲಕ ರಘು ಜಿ. ಎಕ್ಕಾರ್, ಜಿಲ್ಲಾ ಸಂಘಟನಾ ಸಂಚಾಲಕ ಕೃಷ್ಣಾನಂದ ಡಿ., ಮಂಗಳೂರು ಕಾರ್ಪೊರೇಟರ್ ದಯಾನಂದ ಶೆಟ್ಟಿ, ಡಿವೈಎಫ್‌ಐ ಮಂಗಳೂರು ನಗರ ಅಧ್ಯಕ್ಷ ಇಮ್ತಿಯಾಝ್, ಜೈಕನ್ನಡಮ್ಮ ಸಂಪಾದಕ ದೇವಿಪ್ರಸಾದ್, ಎಸೆಫ್‌ಐ ಮುಖಂಡ ನಿತಿನ್ ಕುಮಾರ್, ಸಿಪಿಎಂ ತಾಲೂಕು ಕಾರ್ಯದರ್ಶಿ ಶಿವಕುಮಾರ್, ಬಿ.ಎಂ. ಭಟ್, ಹರಿದಾಸ್ ಮಾತನಾಡಿದರು. 

ಪ್ರತಿಭಟನೆಯಲ್ಲಿ ಸೌಜನ್ಯಾ ತಂದೆ ಚಂದಪ್ಪ ಗೌಡ, ತಾಯಿ ಕುಸುಮಾವತಿ, ಮಾವ ವಿಠಲ ಗೌಡ ಹಾಗೂ ಮನೆಯವರು ಉಪಸ್ಥಿತರಿದ್ದರು. ವಿವಿಧ ಸಂಘಟನೆಗಳ ಮುಖಂಡರಾದ ಜೀವನ್‌ರಾಜ್ ಕುತ್ಯಾರ್, ನ್ಯಾಯವಾದಿ ವಸಂತ ಮರಕಡ, ಡಾ ಹರಳೆ, ದಿನೇಶ್ ಗೌಡ ಮಲವಂತಿಗೆ, ಬಿ.ಕೆ. ವಸಂತ್, ದಾಮೋದರ ಭಟ್, ಸಂಜೀವ ಆರ್. ಮತ್ತಿತರರು ಉಪಸ್ಥಿತರಿದ್ದರು. 

ಐದೂವರೆ ಗಂಟೆ ಪ್ರತಿಭಟನೆ: ಉಪವಾಸ ಸತ್ಯಾಗ್ರಹ ಬೆಳಗ್ಗೆ 11ರಿಂದ 4.30ರವರೆಗೆ ಐದೂವರೆ ಗಂಟೆ ನಡೆಯಿತು. ತಾಲೂಕಿನ ವಿವಿಧ ಗ್ರಾಮೀಣ ಪ್ರದೇಶಗಳಿಂದ ಆಗಮಿಸಿದ ಸಾವಿರಾರು ಪ್ರತಿಭಟನಾಕಾರರು ಧರಣಿಯಲ್ಲಿ ಭಾಗವಹಿಸಿದ್ದರು. ಬಂದವರಲ್ಲಿ ಮಹಿಳೆಯರೇ ಹೆಚ್ಚಾಗಿದ್ದರು. 

ಬೆಳ್ತಂಗಡಿ ಡಿವೈಎಫ್‌ಐ ಕಚೇರಿಯಿಂದ ತಾಲೂಕು ಕಚೇರಿ ಮೈದಾನದವರೆಗೆ ಪ್ರತಿಭಟನಾಕಾರರು ಮೆರವಣಿಗೆ ಮೂಲಕ ಆಗಮಿಸಿದರು. ಸೌಜನ್ಯಾಳ ಹೆತ್ತವರು ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿದರೆ, ಜಿ.ವಿ. ಶ್ರೀ ರಾಮ ರೆಡ್ಡಿ ಸೌಜನ್ಯಾಳ ಭಾವಚಿತ್ರಕ್ಕೆ ಪುಷ್ಟಾರ್ಚನೆ ಮಾಡಿದರು. ಸಂಜೆ ಸೌಜನ್ಯಾಳ ಹೆತ್ತವರು ಪಾನೀಯ ಸೇವಿಸುವುದರೊಂದಿಗೆ ಉಪವಾಸ ಸತ್ಯಾಗ್ರಹ ಮುಕ್ತಾಯವಾಯಿತು. 

ಮುಂದಿನ ಹೆಜ್ಜೆಗಳು: ಅ. 21ರಂದು ಮುಖ್ಯಮಂತ್ರಿ ಮನೆ ಎದುರು ಪ್ರತಿಭಟನೆ, ನ. 1ರಂದು ಬೆಳ್ತಂಗಡಿಯಲ್ಲಿ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕರಿಪತಾಕೆ, ನವೆಂಬರ್ ಮೊದಲ ವಾರ ಮಂಗಳೂರಿನಿಂದ ಬೆಂಗಳೂರಿಗೆ ಕಾಲ್ನಡಿಗೆ ಜಾಥಾ. 

*ಸಚಿವರು, ಬಿಜೆಪಿ ಸಂಸದರು, ಹಿರಿಯ ಕಾಂಗ್ರೆಸ್ ಮುಖಂಡರು ನ್ಯಾಯ ಕೇಳುವವರ ವಿರುದ್ಧ ಕ್ರಮ ಕೆಗೊಳ್ಳುವ ಬೆದರಿಕೆಯೊಡ್ಡುತ್ತಿದ್ದಾರೆ. ಸೌಜನ್ಯಾಳ ಕೊಲೆಯಾದಾಗ ಕ್ರಮ ಕೆಗೊಳ್ಳಲು ಇವರೇಕೆ ಮುಂದಾಗಲಿಲ್ಲ ? ಸೌಜನ್ಯ ಪ್ರಕರಣದಲ್ಲಿ ಧ್ವನಿ ಎತ್ತಿದವರ ವಿರುದ್ಧ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ಕಾಂಗ್ರೆಸ್, ಬಿಜೆಪಿಗರು ಒಂದಾಗಿದ್ದರು. - ಜಿ.ವಿ. ಶ್ರೀರಾಮ ರೆಡ್ಡಿ

Courtesy: Vijaya karnataka

No comments:

Post a Comment