Wednesday 26 December 2012

ವಿಳಂಬದ ಬಗ್ಗೆ ಮನೆಯವರ ಪ್ರಶ್ನೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ತಬ್ಬಿಬ್ಬು!


ಬೆಳ್ತಂಗಡಿ: ಸುಮಾರು ಎರಡೂವರೆ ತಿಂಗಳ ಹಿಂದೆ ಕೊಲೆಯಾದ ಬೆಳ್ತಂಗಡಿ ತಾಲೂಕಿನ ಪಾಂಗಾಳ ವಿದ್ಯಾರ್ಥಿನಿ ಸೌಜನ್ಯಳ ಮನೆಗೆ ಭೇಟಿ ನೀಡಿರುವ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ತಂಡ ಸೌಜನ್ಯ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದೆಂಬ ಭರವಸೆ ನೀಡಿದೆ.

ಆಯೋಗದ ಸದಸ್ಯರು ಸೋಮ ವಾರ ಧರ್ಮಸ್ಥಳ ಸನಿಹದ ಪಾಂಗಾಳ ಮನೆಯಲ್ಲಿನ ಮೃತ ಸೌಜನ್ಯಳ ಕುಟುಂ ಬಿಕರನ್ನು ಮಾತನಾಡಿಸಿ ಪ್ರಕರಣದ ವಿವರಗಳನ್ನು ಪಡೆದುಕೊಂಡರು.

ಮೊದಲಿಗೆ ಆಯೋಗ ತಡವಾಗಿ ಬಂದ ಬಗ್ಗೆ ಮನೆಯವರು ಪ್ರಶ್ನಿಸಿದಾಗ ಕೆಲ ಕಾಲ ಇರಿಸು ಮರಿಸಾದ ಸದಸ್ಯರು ಬಳಿಕ ಘಟನೆಯ ಎಲ್ಲಾ ಮಾಹಿತಿಗಳನ್ನು ಪಡೆದಿದ್ದೇವೆ. ಅನಿವಾರ್ಯವಾಗಿ ತಡವಾಗಿದೆ ಎಂದು ಸಮಜಾಯಿಸಿ ನೀಡಿದರು.
ಈ ಸಂದರ್ಭ ಆಯೋಗದ ಅಧ್ಯಕ್ಷ ಉಮೇಶ್ ಆರಾಧ್ಯ ಮಾಧ್ಯಮದವರಲ್ಲಿ ಮಾತನಾಡಿ, ಪ್ರಕರಣದ ಬಗ್ಗೆ ಈಗಾಗಲೇ ಕೆಲವೊಂದು ಮಾಹಿತಿಗಳನ್ನು ಪಡೆದುಕೊಂಡಿದ್ದೇವೆ. ಆದರೆ ಮನೆಯವರ ಹೇಳಿಕೆ ಪ್ರಾಮುಖ್ಯತೆ ಪಡೆಯುತ್ತದೆ. ಈ ಬಗ್ಗೆ ಸರಕಾರಕ್ಕೆ ವರದಿಯನ್ನೂ ನೀಡಲಿದ್ದೇವೆಯಲ್ಲದೆ ತನಿಖೆ ನಡೆಸುತ್ತಿರುವ ಸಿಐಡಿ ತಂಡಕ್ಕೂ ಮಾಹಿತಿಯನ್ನು ಕೊಡುತ್ತೇವೆ. ಘಟನೆಯ ಸತ್ಯಾಸತ್ಯತೆ ನಾಗರಿಕರಿಗೆ ಗೊತ್ತಾಗಬೇಕು. ಇನ್ನೊಂದು ಇಂತಹ ಪ್ರಕರಣ ನಡೆಯಕೂ ಡದೆಂಬುದೇ ನಮ್ಮ ಕಳಕಳಿ. ಅಲ್ಲದೆ ತನಿಖೆಯನ್ನು ಚುರುಕುಗೊಳಿಸುವಂತೆ ಒತ್ತಡ ಹೇರಲಾಗುವುದು ಎಂದರು. ೧೭ ವರ್ಷ ಒಳಗಿನ ಮಕ್ಕಳ ಮೇಲೆ ಯಾವುದೇ ರೀತಿಯ ದೌರ್ಜನ್ಯವಾದಾಗ ಅವರ ರಕ್ಷಣೆಗೆಂದು ಮಕ್ಕಳ ಹಕ್ಕುಗಳ ಆಯೋಗ ರಚನೆಯಾಗಿದೆ. ಸ್ವತಃ ಪೋಷಕರಿಂದ, ಸಾರ್ವಜನಿಕರಿಂದ, ಶಿಕ್ಷಕರಿಂದ, ಆಹಾರದಲ್ಲಾಗಲಿ, ಮಾನಸಿಕವಾಗಲಿ, ದೈಹಿಕವಾಗಲಿ, ಶಿಕ್ಷಣದಲ್ಲಾಗಲಿ ಆಗುವ ದೌರ್ಜನ್ಯಕ್ಕೆ ತಡೆಯಲು ಆಯೋಗ ಮುಂದೆ ಬರುತ್ತದೆ ಎಂದವರು ವಿವರಿಸಿದರು.

ಸಂತೋಷ್ ಒಬ್ಬನಿಂದಲೇ ಈ ಕೃತ್ಯ ಖಂಡಿತಾ ಆದದ್ದಲ್ಲ. ಪೋಲಿಸರು ಆತನನ್ನು ಫಿಕ್ಸ್ ಮಾಡಿದ್ದಾರೆ. ಇನ್ನೊಂದೆಡೆ ಕೃತ್ಯವೆಸಗಿ ಶವವನ್ನು ಇಲ್ಲಿ ತಂದು ಹಾಕಲಾಗಿದೆ ಎಂದು ಮನೆಯವರು ಆಯೋಗದ ಮುಂದೆ ದೂರಿಕೊಂಡರು.

ಆಯೋಗದ ಸದಸ್ಯರಾದ ಬಿ. ಶಿವರಾಜೇ ಗೌಡ, ವನಿತಾ ತೊರವಿ, ಮಹಿಳಾ ಮತ್ತು ಶಿಶು ಅಭಿವೃದ್ದಿ ಇಲಾಖೆಯ ಮಂಗಳೂರು ಶಿಶು ಅಭಿವೃದ್ದಿ ಯೋಜನಾಧಿಕಾರಿ ಶ್ಯಾಮಲಾ, ಬೆಳ್ತಂಗಡಿಯ ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕೇಶವ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕುಮಾರ್ ಶೆಟ್ಟಿಗಾರ್, ಸುಮಂಗಳ, ಮೇಲ್ವಿಚಾರಕಿ ಕಾವೇರಮ್ಮ, ಮಂಜುಶ್ರೀ ಅಂಗನವಾಡಿ ಕಾರ್ಯಕರ್ತ ಗೋಪಿ ಉಪಸ್ಥಿತರಿದ್ದರು.

No comments:

Post a Comment